Wednesday, April 27, 2011

ಗಜಮುಖ ಮೃದ್ವಸ್ತಿ ಅಥವಾ ಎಲಿಫೆಂಟ್ ಶಾರ್ಕ್ ಮೀನು

ಗೆಳೆಯರೇ ಮತ್ತು ವಿಜ್ಞಾನಾಸಕ್ತರೇ, ಶಾರ್ಕ್ (shark series) ಸರಣಿಯಲ್ಲಿ ಈ ಕಂತಿನಲ್ಲಿ elephant shark ಗಜಮುಖ ಶಾರ್ಕ್ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ.

ಮೊದಲೇ ತಿಳಿಸಿರುವಂತೆ ಶಾರ್ಕ್ ಮೀನು ಕಶೇರುಕ (vertebrates) ಮತ್ತು ಅಕಶೇರುಕಗಳ (invertebrates) ನಡುವಣ ಬಹು ಮುಖ್ಯ ಕೊಂಡಿ. ಹಾಗಾಗಿ ಪ್ರಾಣಿಜೀವ ಸರಣಿಯ ವಂಶವಾಹಿ (gene) ಗಳ ಸಾರಾಂಶ ಮಾಹಿತಿಯನ್ನು ಹೊಂದಿರುವ ಸಾಧ್ಯತೆಗಳು ಹೆಚ್ಚಾಗಿದ್ದು ಶಾರ್ಕ್ ಗಳ ಅಧ್ಯಯನ ಮಾನವನ ವಂಶವಾಹಿಗಳ ವಿಸ್ತೃತ ಮಾಹಿತಿಯನ್ನು ಕಂಡುಹಿಡಿಯುವಲ್ಲಿ ಬಹು ಉಪಯೋಗಿ ಆಗಬಹುದೆಂದು ಈ ದಿಶೆಯಲ್ಲಿ ಸಮ್ಶೋಧನೆಗಳು ಪ್ರಗತಿಯಲ್ಲಿವೆ. 
ಈ ನಿಟ್ಟಿನಲಿ ಅಂದಿನ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ (ಈಗಿನ ಬಿಜಾಪುರದ ಪಶು ಸಂಗೋಪನೆ ಮತ್ತು ಮತ್ಸ್ಯ ಶಾಸ್ತ್ರ ವಿಶ್ವವಿದ್ಯಾಲಯದ) ಅಧೀನದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಮೀನುಗಾರಿಕಾ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿಶೇಷತಃ ನನಗೆ ಹೆಮ್ಮೆಯೆನಿಸುವ ನಮ್ಮ ಸೀನಿಯರ್  ಕನ್ನಡದವರಾದ ಡಾ. ಬೈರಪ್ಪ ವೆಂಕಟೇಶ್ ಸಿಂಗಪೂರ್ ನ  ಸಂಶೋಧನಾ ಸಂಸ್ಥೆಯೊಂದರಲ್ಲಿ ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ.  (http://esharkgenome.imcb.a-star.edu.sg/). ವೈದ್ಯಕೀಯ ಕ್ಷೇತ್ರದ ನೊಬೆಲ್ ವಿಜ್ಞಾನಿ ಬೆನ್ನರ್ ರವರ ಜೊತೆ ಕೆಲಸಮಾಡುವ ಇವರು ಗಜಮುಖ ಮೀನಿನ ಸಂಪೂರ್ಣ ವಂಶವಾಹಿನಿ ಜಾಲವನ್ನು ಬಿಡಿಸಲು ಹೊರಟಿದ್ದಾರೆ. ಈ ಮಾಹಿತಿ ಮಾನವನ ಹಲವಾರು ವೈದ್ಯಕೀಯ ಸವಾಲುಗಳಿಗೆ ಪರಿಹಾರ ಹುಡುಕುವಲ್ಲಿ ಸಹಾಯಕವಾಗಬಹುದು ಎನ್ನುವ ಸಾಧ್ಯತೆ ಇದೆ.
    (ಎಲಿಫೆಂಟ್ ಶಾರ್ಕ್ : ಚಿತ್ರ ಕೃಪೆ ಅಂತರ್ಜಾಲ)

(ಎಲಿಫೆಂಟ್ ಶಾರ್ಕ್: ಚಿತ್ರ ಕೃಪೆ ಅಂತರ್ಜಾಲ)

ಎಲಿಫೆಂಟ್ ಶಾರ್ಕ್, ಭೂತ ಮೀನು, ರೆಪೆರೆಪೆ ಅಥವಾ ಖಮಿರಾ ಎಂದೇ ಕರೆಯಲ್ಪಡುವ ಈ ಮೃದ್ವಸ್ಥಿ ಮೀನು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಸಮುದ್ರಗಳಲ್ಲಿ ಸುಮಾರು ೨೦೦-೫೦೦ ಮೀ ಆಳಗಳಲ್ಲಿ ಕಂಡುಬರುತ್ತದೆ. ಇದು ಹೆಚ್ಚೆಂದರೆ ೧-೧.೨ ಮೀಟರ್ ಬೆಳೆಯುತ್ತದೆ. ಜೀವವಿಕಾಸ ಸರಣಿಯ ಕಶೇರುಕಗಳ ಮೊದಲ ಕೊಂಡಿಗಳು ಎಂದೇ ಬಿಂಬಿತವಾಗುವ ಎಲಿಫೆಂಟ್ ಶಾರ್ಕ್ ಸುಮಾರು ೫೩೦ ದಶ ಲಕ್ಷ ವರ್ಷಗಳ ಹಿಂದೆ ವಿಕಸನ ಹೊಂದಿದ್ದು ಜೀವವಾಹಿನಿಗಳ ಮಾಹಿತಿ ಆಧಾರದಲ್ಲಿ ಮಾನವನ ಜೀವವಾಹಿನಿ ಮತ್ತು ಎಲಿಫೆಂಟ್ ಶಾರ್ಕ್ ನಡುವೆ ಸಾಮ್ಯತೆ ಕಂಡುಬಂದಿದೆ. ಈ ಮೀನಿನ ಜೀವವಾಹಿನಿ ನ್ಯೂಕ್ಲಿಯೋಟೈಡ್ ಪ್ರಮಾಣ ಸುಮಾರು ೯೨೦ ಮೆಗಾ ಬೇಸ್ ಇದೆಯೆಂದು ತಿಳಿಯಲಾಗಿದೆ. ಇವುಗಳ ಇತರೆ ಮಾಹಿತಿಯನ್ನು ಹೊತ್ತ ಮತ್ತೊಂದು ಕಂತು ಸೀಘ್ರದಲ್ಲೇ ಬರಲಿದೆ..................(ನಿಮ್ಮ ಅನಿಸಿಕೆ ಟೀಕೆ, ಟಿಪ್ಪಣಿಯನ್ನು ಸ್ವಾಗತಿಸುತ್ತೇನೆ).