Wednesday, December 26, 2012

ಶಾರ್ಕ್ ಮೀನಿಗೆ ಕ್ಯಾನ್ಸರ್ ಬರೊಲ್ವಂತೆ!! - ಸತ್ಯವೆಷ್ಟು ??



ಶಾರ್ಕ್ ಮೀನಿಗೆ ಕ್ಯಾನ್ಸರ್ ಬರೊಲ್ವಂತೆ!!  - ಸತ್ಯವೆಷ್ಟು ??

ಡಾಕ್ಟ್ರೇ..ಮೀನಿಗೆ ಕ್ಯಾನ್ಸರ್ ಬರೊಲ್ವಂತೆ ನಿಜವೇ...?, ನನಗೆ ಕೆಲವು ಕಡೆ ಎದುರಾಗಿರೋ ಪ್ರಶ್ನೆ ಇದು. ಹೌದೇ..? ನನಗೂ ಜಿಜ್ಞಾಸೆಗೆ ಎಡೆಮಾಡಿದ ವಿಷಯವಾಯಿತು-ಮೀನಿನ ಕ್ಯಾನ್ಸರ್ ನಿರೋಧಕತೆಯ ಪ್ರಶ್ನೆ. ಮೀನಿನ ಆರೋಗ್ಯನಿರ್ವಹಣೆ ನನ್ನ ಸಂಶೋಧನಾ ವಿಷಯವಾದರೂ ಈ ಬಗ್ಗೆ ಹೆಚ್ಚು ಓದಿದ ನೆನಪಿಲ್ಲ. ವಿಷಯ ಜಿಜ್ಞಾಸೆಯ ಹುಳ ತಲೆಗೆ ಹೊಕ್ಕರೆ ಅದರ ಬಗ್ಗೆ ತಿಳಿದುಕೊಳ್ಳುವ ಹುಚ್ಚು ಹಂಬಲ ಎಲ್ಲಾ ಸಂಶೋಧಕರಲ್ಲೂ ಇರುತ್ತೆ ಎನ್ನುವುದಕ್ಕೆ ನಾನು ಹೊರತಾಗಿಲ್ಲವಾದ್ದರಿಂದ ಶೋಧಕಾರ್ಯ ಪ್ರಾರಂಭವಾಯ್ತು.
ಮೀನು ಕಶೇರುಕಗಳ ವಿಕಸನಾ ಹಾದಿಯ ಮೂಲ ಜೀವಿ ಅಲ್ಲಿಂದಲೇ ಮಾನವ ವಿಕಾಸಗೊಂಡಿರುವುದು. ಹಾಗಾಗಿ ಕ್ಯಾನ್ಸರ್ ಬರದೇ ಇರಬಹುದಾದ ಗುಣವಿಶೇಷ ಮೀನುಗಳಲ್ಲಿದೆ ಎನ್ನುವುದೇ ಇಲ್ಲಿಯವರೆಗಿನ ನಡೆದಿರುವ ಸಂಶೋಧನೆಗಳಿಂದ ಸಿಧ್ದವಾಗಿರುವ ವಿಷಯ. ಮೀನು, ಉಭಯ ಜೀವಿ ಮತ್ತು ಉರಗಗಳ ಸುಮಾರು ೪೦೦೦ ಮಾದರಿ (ಸ್ಯಾಂಪಲ್) ಗಳು ಕ್ಯಾನ್ಸರ್ ಹೊಂದಿವೆ ಎನ್ನುವುದನ್ನು ಮಾದರಿಗಳ ಅಧ್ಯಯನದ ಮೂಲಕ ತಿಳಿದುಕೊಳ್ಳಲಾಗಿದೆ. ಹಾಗಾದರೆ ಮೀನುಗಳಲ್ಲಿ ಕ್ಯಾನ್ಸರ್ ವಿರೋಧಿಸುವ ಅಥವಾ ಕ್ಯಾನ್ಸರ್ ಗೆ ಕಡಿಮೆ ಗುರಿಯಾಗುವ ಬಗ್ಗೆ ಸುದ್ದಿಯಾಗಿದ್ದು ಏಕೆ?? ಇದರಲ್ಲಿ ಏನೂ ಹುರುಳಿಲ್ಲವೇ..???
ಜನಸಾಮಾನ್ಯನಿಗೆ ನೀರಿನಲ್ಲಿರುವ ರೆಕ್ಕೆಯುಳ್ಳ ಈಜುವ ಜೀವಿಗಳೆಲ್ಲಾ ಮೀನೇ. ಆದರೆ ಮೀನಿನಲ್ಲಿ ಮೂರು ಮುಖ್ಯ ವಿಧಗಳಿವೆ ಎನ್ನುವುದು ಕೆಲವರಿಗೆ ಮಾತ್ರ ತಿಳಿದಿದೆ. ಜೀವ ವಿಕಸನದ ಮೊದಲ ಕೊಂಡಿ- ಮೃದ್ವಸ್ಥಿ ಮೀನುಗಳು. ಇವುಗಳಲ್ಲಿ ಗಡಸು ಮೂಳೆ ಇರುವುದಿಲ್ಲ. ಮೃದು ಮೂಳೆಯನ್ನು ಹೊಂದಿರುವ ಶಾರ್ಕ್, ರೇ ಮತ್ತು ಸ್ಕೇಟ್ ಮೀನುಗಳು ಈ ಮೊದಲ ಕೊಂಡಿಯ ಸದಸ್ಯಜೀವಿಗಳು. ನಂತರದ ಕೊಂಡಿಯಲ್ಲಿ ಬರುವ ಮೀನಿನ ವಿಧ-ಗಡಸು ಬೆನ್ನು ಮೂಳೆಯಿರುವ ಮೃದುರೆಕ್ಕೆಯುಳ್ಳ ಮೀನುಗಳು. ಇವುಗಳಲ್ಲಿ ಬಹುಪಾಲು ಒಂಟಿ ಬೆನ್ನು ರೆಕ್ಕೆಯಿರುತ್ತದೆ ಮತ್ತು ರೆಕ್ಕೆ ರೇಖೆಯನ್ನು ಹೊಂದಿರುತ್ತವೆ, ಕೆಲವೊಮ್ಮೆ ಮೃದು ಅಥವಾ ಗಡಸು ಮುಳ್ಳು ಇರಲೂಬಹುದು. ನಮ್ಮ ಕೆರೆಗಳಲ್ಲಿ, ನದಿಗಳಲ್ಲಿ ಸಿಗುವ ಗೆಂಡೆ ಮೀನು, ಇದೇ ಕೊಂಡಿಯ ಸದಸ್ಯ ಜೀವಿಗಳು. ಇನ್ನು ಮೂರನೇ ವಿಧ ಅಥವಾ ಕೊಂಡಿಯ ಮೀನುಗಳಲ್ಲಿ ಮೂಳೆಯ ಅಂಶ ಹೆಚ್ಚಾಗಿದ್ದು ರೆಕ್ಕೆಗಳಲ್ಲಿ ಗಡಸು ಮುಳ್ಳುಗಳಿರುತ್ತವೆ.
ಹಾಗಾದರೆ ಈ ಕ್ಯಾನ್ಸರ್ ಭೂತಕ್ಕೆ ಉತ್ತರ ಸಿಕ್ಕಿದ್ದು..?? ಹೌದು, ಹೆಚ್ಚು ವಿಕಸನಗೊಂಡ ಗಡಸು ಮೂಳೆಯ ಮೀನಿನ ಸಮೂಹದಲ್ಲಲ್ಲ. ಮೃದ್ವಸ್ಥಿಗಳಾದ ಶಾರ್ಕ್, ರೇ ಮತ್ತು ಸ್ಕೇಟ್ ಗಳಲ್ಲಿ. ಒಂದಂತೂ ಅಧ್ಯಯನಗಳಲ್ಲಿ ಸಿದ್ಧವಾಗಿತ್ತು. ಮಾನವ ಅಥವಾ ಇನ್ನಿತರ ಸಸ್ತನಿಗಳಲ್ಲಿ ಕಂಡುಬರುವ ಪ್ರಮಾಣದ ಕ್ಯಾನ್ಸರ್ ಪೀಡನೆ ಶಾರ್ಕ್ ಜಾತಿಯ ಮೀನಿನಲ್ಲಿ ಇಲ್ಲದಿರುವುದು..!! ಬಹುಶಃ ಈ ಅಪೂರ್ಣ ಮಾಹಿತಿಯ ಕಾರಣ ಮತ್ತು ಇದನ್ನೇ ಲಾಭಕ್ಕೆ ಉಪಯೋಗಿಸಿಕೊಂಡ ಉದ್ಯಮ ಟನ್ನುಗಟ್ಟಲೆ ಶಾರ್ಕ್ ಗಳ ಮಾರಣಹೋಮಕ್ಕೆ ಕಾರಣವಾಯಿತೆನ್ನುವುದು ಈಗ ಇತಿಹಾಸ.
ಕ್ಯಾನ್ಸರ್ – ದೇಹದ ಯಾವುದೇ ಅಂಗದ ಕೋಶಿಕೆಗಳ ಹುಚ್ಚಾಪಟ್ಟೆ ಬೆಳವಣಿಗೆ. ಜೀವಕೋಶಗಳು ಸಾಮಾನ್ಯಕ್ಕಿಂತ ವೇಗವಾಗಿ ದ್ವಿಗುಣಗೊಂಡು ಹುಣ್ಣಾಗುವಂತೆ ಮಾಡಿ ಆ ಅಂಗದ ಮೂಲಕ್ರಿಯೆಗೆ ಕುತ್ತು ತರುತ್ತವೆ. ಜೀವಕೋಶದ ಬೆಳವಣಿಗೆಗೆ ಪೌಷ್ಠಿಕಾಂಶ ಪೂರೈಕೆ ಅಗತ್ಯ. ಈ ಪೂರೈಕೆಯನ್ನು ರಕ್ತನಾಳಗಳು ಪೌಷ್ಠಿಕಾಂಶಗಳನ್ನು ಹೊತ್ತ ರಕ್ತವನ್ನು ತರುವ ಮೂಲಕ ಮಾಡುತ್ತವೆ. ಅಂದರೆ ಕ್ಯಾನ್ಸರ್ ಬೆಳವಣಿಗೆಗೆ ರಕ್ತನಾಳಗಳ ಹಬ್ಬುವಿಕೆ ಅವಶ್ಯಕ. ಕ್ಯಾನ್ಸರ್ ಪೀಡಿತ ಜೀವಕೋಶಗಳು “ಆಂಜಿಯೋಜೆನಿನ್” ಎಂಬ ಚೋದಕ (ಹಾರ್ಮೋನ್) ವನ್ನು ಸ್ರವಿಸಿ ರಕ್ತನಾಳ ಹಬ್ಬುವಿಕೆಗೆ ಸಹಾಯಮಾಡಿ ಕ್ಯಾನ್ಸರ್ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ನಿರ್ದಿಷ್ಟ ಕ್ರಿಯೆಯಲ್ಲಿ ಶಾರ್ಕ್ ಗಳು ತೋರುವ ವಿವಿಧತೆ ಅವ್ಗುಗಳಲ್ಲಿ ವಿರಳವೆನಿಸುವ ಕ್ಯಾನ್ಸರ್ ಸಾದ್ಯತೆಗೆ ಕಾರಣ ಎನ್ನಲಾಗಿದೆ. ಶಾರ್ಕ್ ಮೀನುಗಳ ಮೃದ್ವಸ್ಥಿಯಲ್ಲಿ “ಆಂಜಿಯೋಜೆನಿನ್ ನಿರೋಧಕ” ಇದೆಯೆಂದು ಸಂಶೋಧನೆ ಮೂಲಕ ಕಂಡುಕೊಳ್ಳಲಾಯಿತು. ಇದೇ ಕಾರಣಕ್ಕೆ ಶಾರ್ಕ್ ಮುಂತಾದ ಮೃದ್ವಸ್ಥಿಗಳ್ಲಿ ಕ್ಯಾನ್ಸರ್ ಸಾಧ್ಯತೆಗಳು ವಿರಳ ಎನ್ನುವ ತೀರ್ಮಾನಕ್ಕೆ ಬರಲಾಯಿಯಿತು. ಈ ಸಂಶೋಧನೆಯ ಪ್ರಕಟಣೆಯಿಂದಾದ ಅವಘಡ ಬಹು ಘೋರವಾಗಿತ್ತು. ಡಾ. ಐ. ವಿಲಿಯಮ್ ಎಂಬುವರು ಶಾರ್ಕ್ ಮೀನಿನ ಮೃದ್ವಸ್ಥಿ ಕ್ಯಾನ್ಸರ್ ತಡೆಗೆ ಉತ್ತಮ ಎನ್ನುವ ರೀತಿ ಪ್ರತಿಪಾದಿಸಿ 1992ರಲ್ಲಿ “ಶಾರ್ಕ್ ಮೀನಿಗೆ ಕ್ಯಾನ್ಸರ್ ತಗಲುವುದಿಲ್ಲ” (Sharks don’t get Cancer) ಎಂಬ ಪುಸ್ತಕವನ್ನು ಬರೆದರು, ಅದು ಬಹು ಜನಪ್ರಿಯವೂ ಆಯಿತು. ತತ್ಪರಿಣಾಮವಾಗಿ “ಲೇನ್” ಎಂಬುವವ ಶಾರ್ಕ್ ಮೀನುಗಾರಿಕೆ ಮತ್ತು ಮೃದ್ವಸ್ಥಿ ಗುಳಿಗೆ ತಯಾರಿಕಾ ಘಟಕವನ್ನು ಪ್ರಾರಂಭಿಸಿದ, ಈ ಹುಚ್ಚು ಹಬ್ಬಿ ಉತ್ತರ ಅಮೇರಿಕಾದ ಹಲವು ಕಂಪನಿಗಳು ಹುಟ್ಟಿಕೊಂಡವು. ಒಂದು ಅಂದಾಜಿನ ಪ್ರಕಾರ ಅಮೇರಿಕಾದ ಕೋಸ್ಟರಿಕಾದಲ್ಲಿದ್ದ ಒಂದು ಮೃದ್ವಸ್ಥಿ ಗುಳಿಗೆ ತಯಾರಿಕಾ ಘಟಕ ವರ್ಷವೊಂದಕ್ಕೆ 25 ಲಕ್ಷಕ್ಕೂ ಮೀರಿ ಶಾರ್ಕುಗಳ ಮಾರಣಹೋಮ ಮಾಡಿತಂತೆ. ಆದರೆ ಈ ಗುಳಿಗೆಗಳಿಂದ ಆ ಭೌಗೋಳಿಕ ಕ್ಷೇತ್ರದಲ್ಲಿ ಮಾನವನ ಕ್ಯಾನ್ಸರ್ ತಡೆಗಟ್ಟಲಾಗಿದೆ ಎನ್ನುವುದಕ್ಕೆ ಯಾವುದೇ ದಾಖಲೆಯಾಗಲೀ ವೈಜ್ಞಾನಿಕ ಪುರಾವೆಯಾಗಲಿ ಸಿಕ್ಕಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ – ಶಾರ್ಕಿನಲ್ಲಿ ನಡೆಯುವ ಕ್ರಿಯೆ ಮಾನವನಲ್ಲಿ ನಡೆಯುತ್ತದೆಯೇ ಎನ್ನುವುದು, ಹಾಗೂ ಗುಳಿಗೆಗಳ ಸೇವನೆ ಆಹಾರ ರೂಪದಲ್ಲಾಗಬೇಕು. ಆಗ ಮೃದ್ವಸ್ಥಿಯಲ್ಲಿದೆ ಎನ್ನಬಹುದಾದ ಆಂಜಿಯೋಜೆನಿನ್ ನಿರೋಧಕ ಔಷಧೀಯ ಅಂಶ ಕ್ಯಾನ್ಸರ್ ಪೀಡಿತ ಕೋಶಗಳ ತನಕ ತಲುಪುವವರೆಗೆ ತನ್ನತನ ಕಾಪಾಡಿಕೊಂಡಿರುತ್ತದೆಯೇ ಎನ್ನುವ ಅಂಶವನ್ನು ಸಾಧಿಸಿ ತೋರಿಸಲಾಗಿಲ್ಲ. ಕೇವಲ ಸ್ಠೂಲ ಅರಿಮೆಗಳಿಂದ ವಿವೇಚನಾ ರಹಿತ ಜೀವಹಾನಿ ಮತ್ತು ಪರಿಸರ ಹಾನಿ ಎಷ್ಟು ಸರಿ??!! ಯೋಚಿಸಬೇಕಾಗುತ್ತದೆ.

3 comments:

prashasti said...

ಒಳ್ಳೆಯ ಲೇಖನ ಆಜಾದ್ ಭಾಯ್..
ಅಪೂರ್ಣ ಮಾಹಿತಿಯ ಲೇಖನವೊಂದರಿಂದ ೨೫ ಲಕ್ಷ ಶಾರ್ಕ್ಗಳ ಮಾರಣ ಹೋಮದ ಬಗ್ಗೆ ಓದಿ ಬೇಸರವಾಯಿತು.
ಮುಂಚೆ ಎಲ್ಲಾ ದೆವ್ವ , ಭೂತಗಳ ಕಾಟ ಎಂದು ಕುರಿ, ಕೋಳಿ, ಕೋಣಗಳ ಬಲಿ ಕೊಡುತ್ತಿದ್ದರಂತೆ. ಈಗ ಈ ರೀತಿಯ ಅವೈಜ್ನಾನಿಕ ಸಂಶೋಧನೆಗಳ ಮೂಲಕ ಮಾಡರ್ನ್ ರೀತಿಯಲ್ಲಿ ಮತ್ತೆ ಪ್ರಾಣಿಗಳ ಬಲಿ ಮುಂದುವರಿದಿದೆ :-( ಮಾನವನ ಸ್ವಾರ್ಥಕ್ಕೆ ಈ ರೀತಿಯ ಪ್ರಾಣಿ ಹತ್ಯೆ ಎಂದು ನಿಲ್ಲುವುದೋ ? :-( :-(

ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು :-)

ಜಲನಯನ said...

ಧನ್ಯವಾದ ಪ್ರಶಸ್ತಿ...ನಿಮ್ಮ ಪ್ರತಿಕ್ರಿಯೆಗೆ.

kavinagaraj said...

ನನ್ನ 'ಕವಿಮನ'ದ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ ನನ್ನನ್ನು ನಿಮ್ಮ ಈ ಸುಂದರ ತಾಣಕ್ಕೆಳೆತಂದಿತು. ವಿಜ್ಞಾನದ ಆವಿಷ್ಕಾರಗಳು ಜೀವಪೋಷಣೆಗೆ ನೆರವಾಗಬೇಕೇ ಹೊರತು ಜೀವಹರಣಕ್ಕಲ್ಲ ಎಂಬ ನಿಮ್ಮ ಕಳಕಳಿಗೆ ನನ್ನ ಹೃತ್ಪೂರ್ವಕ ಬೆಂಬಲವಿದೆ.